ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದಿಂದ ನಾರಾಯಣಗುರು ಜಯಂತಿ ಪ್ರಯುಕ್ತ ಅದ್ಧೂರಿ ಜಾಥಾ



ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ವತಿಯಿಂದ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಪ್ರಯುಕ್ತ ಅದ್ಧೂರೀ ಜಾಥಾ ಸಂಪನ್ನಗೊಂಡಿತು. ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾರಾಯಣಗುರು ಭವನದಿಂದ ಗರುಡವಾಹನದಲ್ಲಿ ಬೃಹತ್ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಮೆರವಣಿಗೆ ಆರಂಭಗೊಂಡಿತು. ಧ್ವಜ ಪ್ರದರ್ಶನ ಹಾಗೂ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಯಮಿ ಅಶೋಕ್ ಪೂಜಾರಿ ವಕ್ವಾಡಿ ಜಾಥಾಕ್ಕೆ ಚಾಲನೆ ನೀಡಿದರು.






ಬಳಿಕ ಮಾತನಾಡಿದ ಯುವ ಮುಖಂಡ ರವೀಂದ್ರ ಪೂಜಾರಿ ಮಾತನಾಡಿ, ನಾರಾಯಣ ಗುರುಗಳು ಕೇವಲ ಬಿಲ್ಲವ ಸಮಾಜಕ್ಕೆ ಮಾತ್ರವಲ್ಲದೇ ಎಲ್ಲಾ ಸಮಾಜಕ್ಕೂ ಮಾರ್ಗದರ್ಶಕರಾಗಿದ್ದವರು. ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂದು ಕನಸು ಕಂಡಿದ್ದ ನಾರಾಯಣ ಗುರುಗಳು, ಒಂದೇ ಜಾತಿ ಒಂದೇ ಮತ ಎನ್ನುವುದನ್ನು ಜಗತ್ತಿಗೆ ಸಾರಿದವರು ಎಂದರು.






ಈ ಸಂದರ್ಭ ರಾಜೇಶ್ ಕಡ್ಗಿಮನೆ, ಕರಣ್ ಪೂಜಾರಿ ತಲ್ಲೂರು, ಆನಂದ ಮಾಸ್ತರ್, ಕುಂದಾಪುರ ತಾಲೂಕು ಪಂಚಾಯತ್ ಮಾಜೀ ಅಧ್ಯಕ್ಷ ಭಾಸ್ಕರ ಬಿಲ್ಲವ, ಮಾಜೀ ಸದಸ್ಯ ಮಂಜು ಬಿಲ್ಲವ, ಮಹೇಶ್ ಪೂಜಾರಿ ಸೇರಿದಂತೆ ಬ್ರಹ್ಮಶ್ರೀ ನಾರಾಯಣ ಗುರುಗಳ ನೂರಾರು ಅಭಿಮಾನಿಗಳು ಜಾಥಾದಲ್ಲಿ ಭಾಗವಹಿಸಿದರು. ನಾರಾಯಣ ಗುರು ಸಭಾಭವನದಿಂದ ಹೊರಟ ಜಾಥಾ ಬಸ್ರೂರು ಮೂರುಕೈ ಮೂಲಕ ಸಾಗಿ ಮತ್ತೆ ನಾರಾಯಣ ಗುರು ಸಭಾಭವನದಲ್ಲಿ ಸಮಾಪನಗೊಂಡಿತು.