ಕುಂದಾಪ್ರ ಭಾಷೆ ಮಾತಾಡುಕೆ ಮಾತ್ರ ಅಲ್ಲ ಕೇಂಬುಕೂ ಚಂದ – ಹಂದಟ್ಟಿನಲ್ಲಿ ಆಸಾಡಿ ಒಡ್ರ್ ವಿನೂತನ ಕಾರ್ಯಕ್ರಮದಲ್ಲಿ ಖುಷಿ ಹಂಚಿಕೊಂಡ ಕುಂದಗನ್ನಡ ಸಾಹಿತಿ ಪೂರ್ಣಿಮಾ ಕಮಲಶಿಲೆ


ಕುಂದಾಪುರ: ಕುಂದಾಪ್ರ ಭಾಷಿ ಅಂದ್ರೆ ಅದ್ ಅಂತಿಂತ ಭಾಷಿ ಅಲ್ಲ. ಅದ್ ಮಾತಾಡುಕೂ ಚಂದ, ಕೇಂಬುಕೂ ಚಂದ ಎಂದು ಕುಂದಗನ್ನಡ ಸಾಹಿತಿ ಪೂರ್ಣಿಮಾ ಕಮಲಶಿಲೆ ಹೇಳಿದರು. ಭಾನುವಾರ ಕೋಟದ ಹಂದಟ್ಟು ಗೆಳೆಯರ ಬಳಗ ಗೀತಾನಂದ ವೇದಿಕೆಯಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಾತೃ ಸಂಸ್ಥೆ ಕೋಟದ ಪಂಚವರ್ಣ ಯುವಕ ಮಂಡಲ ವತಿಯಿಂದ ನಡೆದ ನಾಲ್ಕನೇ ವರ್ಷದ ಆಸಾಡಿ ಒಡ್ರ್ -2025 ಊರ್ ಕೇರಿ ಬದ್ಕಿನ್ ಹಬ್ಬು ಕುಂದಾಪ್ರ ಭಾಷೆ, ಸೊಗಡು, ತಲಾಂತರದಿಂದ ಬಂದ ಗಾದೆಗಳು, ಒಗಟುಗಳ ಬಗ್ಗೆ ಮಾತನಾಡಿದರು.


ಡಾ.ವಾಣಿಶ್ರೀ ಐತಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕುಂದಾಪ್ರ ಭಾಷೆಯಲ್ಲಿ ವೈವಿಧ್ಯತೆ ಇದೆ ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಬದುಕಿನ ಸಂಸ್ಕತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಎಂದರು.


ಗ್ರಾಮೀಣ ಪರಿಕರಗಳ ಪ್ರದರ್ಶನವನ್ನು ಉದ್ಘಾಟಿಸಿದ ಶ್ರೀಲತಾ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಮಾತನಾಡಿ, ಕುಂದಾಪ್ರ ಭಾಷೆಗೆ ತನ್ನದೇ ಆದ ಸಂಸ್ಕೃತಿ ಸಂಪ್ರದಾಯಗಳಿವೆ. ಅವುಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಹೋಗುವುದರ ಜೊತೆಗೆ ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸುವುದೂ ನಮ್ಮ ಜವಾಬ್ಧಾರಿಯಾಗಬೇಕು ಎಂದರು.



ಚಿಂತಕಿ ಪ್ರೇಮ ಶೆಟ್ಟಿ ಅವರು ಆಸಾಡಿ ಒಡ್ರ್ ಗ್ರಾಮೀಣ ತಿನಿಸುಗಳನ್ನು ಸಾಂಸ್ಕೃತಿಕ ಅನಾವರಣಗೊಳಿಸಿದರು. ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ತೆಂಗಿನ ಹೂ ಅರಳಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ನೇಹಕೂಟದ ಸಂಚಾಲಕಿ ಭಾರತಿ ವಿಷ್ಣುಮೂರ್ತಿ ಮಯ್ಯ ದಂಪತಿಗಳು ಭತ್ತದ ಗಿಡಕ್ಕೆ ನೀರೇರೆವ ಮೂಲಕ ಉದ್ಘಾಟಿಸಿದರು. ಹಂದಟ್ಟು ಮಹಿಳಾ ಬಳಗದ ವತಿಯಿಂದ ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ದಿನಸಿ ಪರಿಕರವನ್ನು ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಿದರು. ಸಾಮಾಜಿಕ ಚಿಂತಕಿ ಭಾರತಿ ವಿ ಮಯ್ಯ ಇವರಿಗೆ ಆಸಾಡಿ ಒಡ್ರ್ ಸಾಧಕ ಪುರಸ್ಕಾರ ನೀಡಲಾಯಿತು. ಲೇಖಕಿ ಪೂರ್ಣಿಮಾ ಕಲಮಶಿಲೆ ಇವರನ್ನು ಅಭಿನಂದಿಸಲಾಯಿತು.



ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.


ಮಹಿಳಾ ಮಂಡಲದ ಚಾಲಕಿ ಸುಜಾತ ಬಾಯರಿ ಹಾಗೂ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ವೀಣಾ ಪ್ರಕಾಶ್ ಪಡುಕರೆ ಪ್ರಾಸ್ತಾವಿಸಿದರು. ಸದಸ್ಯೆ ವಸಂತಿ ಕುಂದರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕೋಶಾಧಿಕಾರಿ ಸುಜಾತ ಉದಯ್ ತಿಂಗಳಾಯ ವಂದಿಸಿದರು. ಯುವಕ ಮಂಡಲ ಸಲಹಾ ಸಮಿತಿಯ ರವೀಂದ್ರ ಕೋಟ ಸಂಯೋಜಿಸಿದರು.



ಗಾಡಿ ಕೂಸಣ್ಣನ ಎತ್ತಿನ ಗಾಡಿ,ಗ್ರಾಮೀಣ ಪರಿಕರಗಳಾದ ಚೆನ್ನಿಮಣಿ, ಕೊಪ್ಪರಿಗೆ, ನೇಗಿಲು ನೋಗ, ತಾಮ್ರದ ಹರಿ, ಮಣ್ ಮರ್ಗಿ, ಹಳೆಯ ಕಾಲದ ಗಡಿಯಾರ, ಗಾಡಿ ಕೂಸಣ್ಣನ ಎತ್ತಿನಗಾಡಿ, ಗಿರೀಜಾ ಬೋಜಣ್ಣ ಇವರ ಕಂಬಳ ಪರಿಕರ, ಸಾಂಬಾರ್ ಬಟ್ಲ್, ನರೋಳಿ ಸೊಪ್ಪಿನ ದೋಸೆ, ಬೆಸಿದ ಕಡ್ಲೆ, ಅಕ್ಕಿ ಉಂಡಿ, ಹೀಗೆ 80ಕ್ಕೂ ಅಧಿಕ ಬಗೆಯ ತಿಂಡಿ ತಿನಿಸುಗಳ ಸ್ಪರ್ಧೆಯಲ್ಲಿ ಕಂಡುಬಂತು. ಹಂದಟ್ಟು ಸುಬ್ಬಯ್ಯ ಪೂಜಾರಿ ಹೊಲಿ ಕರೆಯುವ ಹಾಗೂ ಸ್ಥಳೀಯ ಪುಟಾಣಿಗಳು ಹೊಲಿ ಕೂಗುವ ದೃಶ್ಯ ವಿಶೇಷವಾಗಿ ಗಮನ ಸೆಳೆಯಿತು.




ಆಸಾಡಿ ಒಡ್ರ್ ಕಾರ್ಯಕ್ರಮದ ಸಾಂಸ್ಕ್ರೃತಿಕ ಕಾರ್ಯಕ್ರಮಕ್ಕೆ ವಿಶಿಷ್ಠವಾಗಿ ಪಂಚವರ್ಣ ಮಹಿಳಾ ಮಂಡಲದ ಪದಾಧಿಕಾರಿಗಳು ಹಳೆಯ ಸಂಪ್ರದಾಯದಂತೆ ದೀಪ, ಭತ್ತ ಸಸಿ, ವೀಳ್ಯೆದೆಲೆ, ಅಡಿಕೆ, ತುಳಸಿ ಕಟ್ಟೆ, ಕಳಶ, ಅರಸಿನ ಕುಂಕುಮ, ಬಳೆ, ಹೂವು, ಸಿಂಗಾರ, ಹಣ್ಣು, ನೀರು ಬೆಲ್ಲದೊಂದಿಗೆ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಸ್ನೇಹಕೂಟ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು.