ಗಂಗೊಳ್ಳಿ: ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರ ಪೈಕಿ ಒಬ್ಬರ ಮೃತ ದೇಹ ಪತ್ತೆ
ಕುಂದಾಪುರ: ನಿನ್ನೆ ಜುಲೈ 15ರಂದು ಬೆಳಿಗ್ಗೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಪೈಕಿ ಒಬ್ಬರ ಮೃತ ದೇಹ ಇಂದು ಬೆಳಿಗ್ಗೆ ನಾಲ್ಕು ಗಂಟೆಯ ಸಮಯಕ್ಕೆ ಕೋಡಿ ಲೈಟ್ ಹೌಸ್ ಬಳಿ ಪತ್ತೆಯಾಗಿದೆ.

ಜುಲೈ 15ರಂದು ಬೆಳಿಗ್ಗೆ 7:30 ಕ್ಕೆ ಸುಮಾರಿಗೆ ನಾಲ್ಕು ಜನ ಮೀನುಗಾರರು ಇದ್ದ ದೋಣಿ ಮೀನುಗಾರಿಕೆಗೆ ತೆರಳಿತ್ತು. ಆದರೆ ಕಡಲುಬ್ಬರದ ತೀವ್ರತೆಗೆ ಮೀನುಗಾರಿಕೆ ಸಾಧ್ಯವಾಗದೆ ಮೀನುಗಾರರು ವಾಪಾಸು ತೆರಳಿದ್ದರು. ಸುಮಾರು 9:30 ಗಂಟೆ ಸಂದರ್ಭ ಗಂಗೊಳ್ಳಿಯ ಮಡಿ ಲೈಟ್ ಹೌಸ್ ಸಮೀಪದ ಕೋಡಿ ಸೀವಾಕ್ ಮತ್ತು ಗಂಗೊಳ್ಳಿ ಸೀವಾಕ್ ನಡುವಿನ ಅಳಿವೆ ಬಾಗಿಲಿನಲ್ಲಿ ನಾಲ್ಕು ಜನ ಮೀನುಗಾರರಿದ್ದ ನಾಡದೋಣಿ ಸಮುದ್ರದ ಅಲೆಗಳ ತೀವ್ರತೆಗೆ ಮಗುಚಿ ಬಿದ್ದಿತ್ತು. ಘಟನೆಯಲ್ಲಿ ಸಂತೋಷ್ ಖಾರ್ವಿ ಎಂಬುವರು ಬದುಕುಳಿದಿದ್ದರು. ಉಳಿದಂತೆ ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಹಾಗೂ ರೋಹಿತ್ ಖಾರ್ವಿ ಎಂಬ ಮೂವರು ಮೀನಗಾರರು ನಾಪತ್ತೆಯಾಗಿದ್ದರು.
ರೋಹಿತ್ ಖಾರ್ವಿಯವರ ಮೃತ ದೇಹ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಪತ್ತೆಯಾಗಿದೆ. ಉಳಿದಿಬ್ಬರ ಶೋಧ ಕಾರ್ಯ ಮುಂದುವರಿದಿದೆ. ನಿನ್ನೆ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ, ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಗಂಗೊಳ್ಳಿಗೆ ಭೇಟಿ ನೀಡಿದ್ದರು. ಹಗಲು ರಾತ್ರಿ ರಕ್ಷಣಾ ಪಡೆ ಶೋಧ ಕಾರ್ಯ ನಡೆಸಿತ್ತು.ಸ್ಥಳೀಯರು, ಮುಳುಗು ತಜ್ಞರು ಸಹಕರಿಸುತ್ತಿದ್ದಾರೆ.