ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಕಳವಿಗೆ ವಿಫಲ ಯತ್ನ – ಸಹಾಯಕ್ಕೆ ಬಂದ ಸಿಸಿ ಕೆಮೆರಾ
ಕುಂದಾಪುರ: ಒಂಟಿ ಮಹಿಳೆ ವಾಸ ಮಾಡುತ್ತಿದ್ದ ಮನೆಗೆ ತಡ ರಾತ್ರಿ ಇಬ್ಬರು ದುಷ್ಕರ್ಮಿಗಳ ತಂಡ ಕಳವು ನಡೆಸಲು ವಿಫಲ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಆದರೆ ಪೊಲೀಸರ ತಕ್ರಷಣ ಕ್ರಮದಿಂದಾಗಿ ಕಳ್ಳರು ಪರಾರಿಯಾಗಿದ್ದಾರೆ.

ಕುಂದಾಪುರ ಸಮೀಪದ ಕೋಟೇಶ್ವರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಇರುವ ಮ್ಯಾಕ್ಸಿಮಾ ವಿಲ್ಲಾ ಎಂಬ ಮನೆಗೆ ಭಾನುವಾರ ನಸುಕಿನಲ್ಲಿ ಸುಮಾರು 2 ಗಂಟೆ ಸುಮಾರಿಗೆ ಇಬ್ಬರು ಮುಸುಕುಧಾರಿಗಳು ಆಗಮಿಸಿದ್ದಾರೆ. ಆ ಪೈಕಿ ಒಬ್ಬನ ಕೈಯಲ್ಲಿ ಕತ್ತಿಯಂತಿದ್ದ ಕಬ್ಬಿಣದ ಸಲಾಕೆ, ಹಾಗೂ ಸ್ಕ್ರೂಡ್ರೈವರ್ ನಂತಹಾ ವಸ್ತುಗಳಿದ್ದು, ಮನೆಯ ಹೊರಗೆ ಇದ್ದ ಗ್ರಿಲ್ ಬೀಗ ಮುರಿದು ಸಿಟ್ ಔಟ್ ಗೆ ಬಂದಿದ್ದಾರೆ. ಬಳಿಕ ಮನೆಯ ಮುಂಭಾಗದಲ್ಲಿರುವ ಬಾಗಿಲು ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿದ್ದು, ಒಂಟಿ ಮಹಿಳೆಯ ಸಂಬಂಧಿಕರು ವಿದೇಶದಲ್ಲಿದ್ದು, ಅವರ ಮೊಬೈಲ್ ನಲ್ಲಿ ಸಿಸಿಟಿವಿ ಅಲಾರಾಂ ಮೊಳಗಿದೆ. ತಕ್ಷಣ ವಿದೇಶದಲ್ಲಿದ್ದವರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ಕೋಟೇಶ್ವರ ಸಮೀಪವೇ ಇದ್ದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಪೊಲೀಅರು ಬಂದಿದ್ದನ್ನು ನೋಡಿದ ಕಳ್ಳರು ತಕ್ಷಣ ಪರಾರಿಯಾಗಿದ್ದಾರೆ. ಮನೆಯಲ್ಲಿ ಮಹಿಳೆ ಇದ್ದಾಗಲೂ ಕಳ್ಳರು ಮನೆ ಬಾಗಿಲು ಒಡೆಯಲು ಯತ್ನಿಸಿರುವ ಘಟನೆಯಿಂದ ಕೋಟೇಶ್ವರ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಇದೀಗ ಇಡೀ ಗ್ರಾಮ ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಗಿದೆ. ಪೊಲೀಸರು ಪರಿಶೀಲನೆ ನಡೆಸುವಲ್ಲಿ ಮಗ್ನರಾಗಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ಕುಂದಾಪುರ ಆಸುಪಾಸಿನ ಗ್ರಾಮಗಳಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ದಿಟ್ಟ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.