ಬಾಲ ಸಾಹಿತಿ ಹೆಚ್. ವಿಧಾತ್ರಿ ರವಿಶಂಕರ್ ಅವರ ‘ನಕ್ಷತ್ರ ಪಟಲ’ ಕೃತಿಗೆ ಬಾಲಸಾಹಿತ್ಯ ಚಿಗುರು ಪುರಸ್ಕಾರ

ಕುಂದಾಪುರ: ಅತೀಸಣ್ಣ ವಯಸ್ಸಿಗೆ ಹಲವಾರು ಕೃತಿಗಳನ್ನು ರಚಿಸಿ ಪ್ರಕಾಶಿಸಿರುವ ಬಾಲ ಸಾಹಿತಿ ಕುಮಾರಿ ಹೆಚ್. ವಿಧಾತ್ರಿ ಅವರಿಗೆ ನಕ್ಷತ್ರ ಪಟಲ ಎನ್ನುವ ಬಾಲ ಸಾಹಿತ್ಯದ ಕವನ ಸಂಕಲನ ಕೃತಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಶ್ರೀ ಸಂಗಮೇಶ್ವರ ಬಡಾವಣೆಯ ವಿದ್ಯಾಚೇತನ ಪ್ರಕಾಶನ ಕೊಡಮಾಡುವ ಬಾಲ ಸಾಹಿತಿ ಚಿಗುರು ಪುರಸ್ಕಾರ ಲಭಿಸಿದೆ ಎಂದು ವಿದ್ಯಾಚೇತನ ಪ್ರಕಾಶನದ ಮುಖ್ಯಸ್ಥ ಹ.ಮ.ಪೂಜಾರ ತಿಳಿಸಿದ್ದಾರೆ.
ಜೂನ್ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪುರಸ್ಕಾರವು ಎರಡು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ವಿದ್ಯಾಚೇತನ ಪ್ರಕಾಶನದ ರಜತ ವರ್ಷದ ಸಂಭ್ರಮದಲ್ಲಿ ವಿಯಪುರದ ಸಿಂದಗಿಯಲ್ಲಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಿದ್ಧಾಪುರದ ಸರಸ್ವತಿ ವಿದ್ಯಾಲಯ ಶಾಲೆಯ ಏಳನೆ ತರಗತಿ ವಿದ್ಯಾರ್ಥಿನಿ ವಿಧಾತ್ರಿ, ಸಿದ್ಧಾಪುರದ ಸರ್ಕಾರೀ ಪ್ರೌಢ ಶಾಲೆಯ ಶಿಕ್ಷಕಿ ವಸಂತಿ ಹಾಗೂ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿರುವ ರವಿಶಂಕರ್ ಅವರ ಪುತ್ರಿ. ಎರಡು ವರ್ಷ ವಯಸ್ಸಿನಲ್ಲಿಯೇ ನೂರಾ ಒಂದು ಕೌರವರ ಹೆಸರು, ಅರವತ್ತು ಸಂವತ್ಸರಗಳು, ಮಳೆ ನಕ್ಷತ್ರಗಳು, ಸಂಸ್ಕೃತ ಸುಭಾಷಿತಗಳು, 118 ಮೂಲವಸ್ತುಗಳು, 224 ವಿಧಾನಸಭಾ ಕ್ಷೇತ್ರಗಳು, ಶ್ರೀರಾಮನ ವಂಶವೃಕ್ಷ, ಹಿಂದೂಸ್ಥಾನದ ಪ್ರಾಚೀನ 56 ದೇಶಗಳು, ಭಗವದ್ಗೀತೆ ಶ್ಲೋಕಗಳನ್ನು ನಿರರ್ಗಳವಾಗಿ ಹೇಳಿ ಹಲವಾರು ಸಭೆ ಸಮಾರಂಭಗಳಲ್ಲಿ ಭೇಷ್ ಎನಿಸಿಕೊಂಡಿದ್ದಾರೆ. ಏಕಪಾತ್ರಾಭಿನಯ, ಭಾಷಣ ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಈ ಪುಟ್ಟ ಸಾಹಿತಿ, ಕೊರೋನ ಲಾಕ್ಡೌನ್ ಸಮಯದಲ್ಲಿ ಕವನಗಳನ್ನು ಬರೆಯುವ ಹವ್ಯಾಸ ಪ್ರಾರಂಭಿಸಿದ್ದಾರೆ. ಎಂಟನೇ ವಯಸ್ಸಿಗೆ ಮೂರನೇ ತರಗತಿಯಲ್ಲಿದ್ದಾಗ ಕನ್ನಡದಲ್ಲಿ “ಗುಬ್ಬಚ್ಚಿ”, ನಾಲ್ಕನೇ ತರಗತಿಯಲ್ಲಿದ್ದಾಗ ಇಂಗ್ಲೀಷ್ನಲ್ಲಿ The songs of Cinderella , ಐದನೇ ತರಗತಿಯಲ್ಲಿ ಇಂಗ್ಲೀಷ್ ಸಣ್ಣ ಕತೆಗಳ My Fairy World ಎಂಬ ಮೂರು ಪುಸ್ತಕಗಳು ಪ್ರಕಟಗೊಂಡಿದ್ದು , ನಾಲ್ಕನೆಯ ಪುಸ್ತಕ ” ನಕ್ಷತ್ರ ಪಟಲ ” ಕನ್ನಡದಲ್ಲಿ ಶಿಶು ಗೀತೆಗಳ ರೂಪದಲ್ಲಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡಿದೆ. 2022ರ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯ ಪ್ರಶಸ್ತಿ ನಿಡಂಬೂರು ಬೀಡು ಅಣ್ಣಾಜಿ ಬಲ್ಲಾಳ ಬಾಲ ಪುರಸ್ಕಾರ ಪ್ರಶಸ್ತಿ, 2023ರಲ್ಲಿ ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ ಲಭಿಸಿದೆ. kids carnival ನಡೆಸುವ ರಾಷ್ಟ್ರ ಮಟ್ಟದ The True Story Teller ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡಾ ವಿಭಾಗದಲ್ಲೂ ಉದ್ದ ಜಿಗಿತದಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿರುವ ವಿಧಾತ್ರಿ, ಭರತನಾಟ್ಯ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾರೆ. ಯಕ್ಷಗಾನ, ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ನಡೆಸುತ್ತಿದ್ದಾರೆ. ಪತ್ರಿಕೆಗಳ ಪದಬಂಧ ಬಿಡಿಸುವುದು, ಪದಬಂಧ ರಚಿಸುವುದು ಮೆಚ್ಚಿನ ಹವ್ಯಾಸ.
