BlogAgricultureCulturalEconomyEducationEntertainmentFashionHealthHighlightsHuman storiesLifestyleLocal newsNatureOthersSuccess storiesTop StoriesTrending

ಅಕ್ಟೋಬರ್ 4: ಆಲೂರಿನ ಚಿತ್ರಕೂಟದಲ್ಲಿ ಆಯುರ್ವೇದ ಹಬ್ಬ 2026 – ಡಾ. ರಾಜೇಶ್ ಬಾಯರಿ ಸುದ್ಧಿಗೋಷ್ಟಿ

Aware others:

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನ ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಅಕ್ಟೋಬರ್ 4ರ ಭಾನುವಾರದಂದು ಆಯುಷ್ ಇಲಾಖೆ ಸಹಯೋಗದೊಂದಿಗೆ ಚಿತ್ರಕೂಟ ಆಯುರ್ವೇದ ಹಬ್ಬ 2026ಅನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಹೇಳಿದ್ದಾರೆ.

ಕುಂದಾಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಗಡಿಬಿಡಿಯ ಜೀವನಶೈಲಿ, ಪ್ಯಾಕೆಟ್ ಆಹಾರ ಹಾಗೂ ಡೆಡ್‌ಲೈನ್‌ಗಳ ಒತ್ತಡದಲ್ಲಿ ಬದುಕುತ್ತಿರುವ ಇಂದಿನ ಪೀಳಿಗೆಗೆ ಆಯುರ್ವೇದವನ್ನು ನೈಜ ಗ್ರಾಮೀಣ ಪರಿಸರದಲ್ಲಿ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಹಳ್ಳಿಯ ಮಡಿಲಲ್ಲಿ ಆರೋಗ್ಯ ಹಬ್ಬ ಎಂಬ ಧ್ಯೇಯವಾಕ್ಯದೊಂದಿಗೆ ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಹಬ್ಬ ನಡೆಯಲಿದೆ. ಆಯುರ್ವೇದ ಎಂಬುದು ಕೇವಲ ಕ್ಲಿನಿಕ್‌ನ ಕಷಾಯಕ್ಕೆ ಸೀಮಿತವಾಗಿರದೆ, ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ನಿತ್ಯ ಜೀವನದ ಆರೋಗ್ಯಕರ ಶೈಲಿ ಎಂಬುದನ್ನು ಪ್ರತ್ಯಕ್ಷವಾಗಿ ಅನುಭವಿಸಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟೀ ಅನುಪಮಾ ಎಸ್. ಶೆಟ್ಟಿ, ಕುಂದಾಪುರದ ಚಿನ್ಮಯ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಉಮೇಶ್ ಪುತ್ರನ್, ಕುಂದಾಪುರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದಚಾತ್ರ ಹಾಗೂ ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಮುಖ್ಯಸ್ಥರು ಮತ್ತು ಸಹಾಯಕ ಪ್ರಧಾನವ್ಯವಸ್ಥಾಪಕ (ಎಜಿಎಂ) ರಮೇಶ್ ವೈದ್ಯ ಹಾಗೂ ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಭಾಗವಹಿಸಲಿದ್ದಾರೆ. ಇದೇ ಸಂದರ್ಭ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸ್ವರ್ಣಕಮಲ ಪುರಸ್ಕೃತ ಖ್ಯಾತ ಚಿತ್ರ ವಿಮರ್ಶಕ ಡಾ. ಪ್ರದೀಪ್ ಕೆಂಚನೂರು ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜೀ ಶಾಸಕರಾದ ಬಿ.ಎಂ. ಸುಕುಮಾರ್ ಶೆಟ್ಟಿ, ಕೆ. ಗೋಪಾಲ ಪೂಜಾರಿ ಭಾಗವಹಿಸಲಿದ್ದಾರೆ. ಮಾರಣಕಟ್ಟೆಯ ಎಂ.ಎಸ್. ಮಂಜ ಚಾರಿಟೇಬಲ್ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜ, ಹಿರಿಯ ಪತ್ರಕರ್ತ ಯು. ಎಸ್. ಶೆಣೈ ಹಾಗೂ ಉಡುಪಿ ಜಿಲ್ಲಾ ಎ.ಎಫ್.ಐ ಅಧ್ಯಕ್ಷ ಡಾ. ಎಸ್. ಆಂಚನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಆಯುರ್ವೇದ ಹಬ್ಬದಲ್ಲಿ ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ನಾಡಿ ಪರೀಕ್ಷೆ ಹಾಗೂ ತ್ರಿದೋಷಗಳಾದ ವಾತ,  ಪಿತ್ತ, ಕಫ ಪ್ರಕೃತಿ ವಿಶ್ಲೇಷಣೆ ನಡೆಸಿ ವೈಯಕ್ತಿಕ ಆಹಾರ ಮತ್ತು ಜೀವನ ಶೈಲಿ ಮಾರ್ಗದರ್ಶನ, ದೇಸಿ ಗೋಶಾಲಾ ಭೇಟಿ, ಗೋಸಂಸ್ಕೃತಿಯ ಮಹತ್ವ ಹಾಗೂ ಹಸುವನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ನವೀನ ಅನುಭವ, ಅಡುಗೆ ಸಾಮಗ್ರಿಗಳು ಹಾಗೂ ಹಿತ್ತಿಲಿನ ಔಷಧೀಯಗಿಡ ಮೂಲಿಕೆಗಳಿಂದ ರೋಗ ನಿರೋಧಕ ಕಷಾಯಗಳನ್ನು ತಯಾರಿಸುವ ನೇರ ಪ್ರಾತ್ಯಕ್ಷಿಕೆ,

18 ಎಕರೆ ಹಸಿರು ಪರಿಸರದಲ್ಲಿರುವ ನಾಗಕೇಸರ, ರಕ್ತಚಂದನ, ಏಕನಾಯಕ, ರುದ್ರಾಕ್ಷಿ ಸೇರಿದಂತೆ 150ಕ್ಕೂಹೆಚ್ಚುಅಪರೂಪದ ಗಿಡಮೂಲಿಕೆಗಳ ಪರಿಚಯ ನಡಿಗೆ. ಆಸಕ್ತ ಮಕ್ಕಳಿಗೆ ಔಷಧೀಯ ಸಸಿಗಳ ವಿತರಣೆ ಕಾರ್ಯಕ್ರಮ, ಪಂಚಕರ್ಮ ಚಿಕಿತ್ಸಾ ವಿಧಾನಗಳ ಪರಿಚಯ ಮತ್ತು ಮಾಹಿತಿ ಸಿಗಲಿದೆ.

ಪ್ರಕೃತಿ, ಆರೋಗ್ಯ ಮತ್ತು ಗ್ರಾಮೀಣ ಪರಂಪರೆಗೆ ಪೂರಕವಾದ ವಿವಿಧ ಸಾವಯವ ಮಳಿಗೆಗಳನ್ನು ಆಯೋಜಿಸಲಾಗಿದೆ. ಸದ್ಗುರು ಆಯುರ್ವೇದ, ಆತ್ಮಿಕ್ ಆಯುರ್ವೇದ ಹಾಗೂ ಆಯುರ್ವೇದಿಕ್ ಹುಬ್ಬಳ್ಳಿಯ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳು, ನೈಸರ್ಗಿಕ ಮಸಾಜ್ಸಾಧನಗಳು, ದೇಸಿ ಗೋಉತ್ಪನ್ನಗಳು, ತುಮಕೂರಿನ ಸಾವಯವ ಧಾನ್ಯಗಳು, ತಾರಸಿ ತೋಟಕ್ಕೆ ಸೂಕ್ತವಾದ ದೇಸಿ ತರಕಾರಿ ಬೀಜಗಳು, ಕುಂದಾಪುರದ ಸ್ವದೇಶಿ ಮಾಳಿಗೆ ಹಾಗೂ ಉಡುಪಿಯ ಆರ್.ಕೆ. ಉಪ್ಪಿನಕಾಯಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರಲಿವೆ. ಇದರೊಂದಿಗೆ ಆರೋಗ್ಯಕರ ಪಾನೀಯಗಳಾದ ತಾಜಾನೀರಾ, ನೆರಳಕಟ್ಟೆಯ ಕಬ್ಬಿನ ಹಾಲು, ಆಲೂರಿನ ಗೋಲಿ ಸೋಡಾ, ನೈಸರ್ಗಿಕ ಐಸ್‌ಕ್ರೀಮ್ಹಾ ಗೂ ಪರಿಸರ ಸ್ನೇಹಿ ಜೀವನ ಶೈಲಿಗೆ ಒತ್ತುನೀಡುವ ಆಲೂರಿನ ಮಣ್ಣಿನ ಮಡಕೆಗಳು, ಮರದ ಗೃಹಬಳಕೆ ಪರಿಕರಗಳು ಮತ್ತು ಹಟ್ಟಿಯಂಗಡಿಯ ನಮ್ಮಭೂಮಿ ಸಂಸ್ಥೆಯ ಗ್ರಾಮೀಣ ಕರಕುಶಲ ವಸ್ತುಗಳ ಮಳಿಗೆಗಳು ಸಾರ್ವಜನಿಕರಿಗೆ ನೈಸರ್ಗಿಕ ಜೀವನ ಶೈಲಿಯನ್ನು ಹತ್ತಿರದಿಂದ ಪರಿಚಯಿಸಲಿವೆ.

ಮಧ್ಯಾಹ್ನದ ಊಟಕ್ಕೆ ಆರೋಗ್ಯ ಮತ್ತು ರುಚಿಯ ಸಂಗಮವಾದ ಅಪರೂಪದ ಆಯುರ್ವೇದ ಥಾಲಿಯನ್ನು ಅತ್ಯಂತ ರಿಯಾಯಿತಿ/ಸಣ್ಣಮೊತ್ತಕ್ಕೆ ನೀಡಲಾಗುತ್ತದೆ. ಈ ಥಾಲಿಯಲ್ಲಿ ಗೆಣಸಿನ ಸೂಪ್, ಹುರುಳಿ ಕೊಟ್ಟೆ ಕಡುಬು, ನೆಲಗಡಲೆ ಕೋಸುಂಬರಿ, ಹೆಸರು ಕಾಳು ತೊವೆ, ಕೆಂಪು ಅಕ್ಕಿಅನ್ನ, ಹುರುಳಿ ಸಾರು, ಪತ್ರೊಡೆ, ನುಗ್ಗೆ ಸೊಪ್ಪಿನ ಚಟ್ನಿ, ಚಕ್ತೆ ಸೊಪ್ಪಿನ ಕೆಂಪು ಚಟ್ನಿ, ಒಂದೆಲಗ ತಂಬಳಿ, ಬೋಂಡ ಪಾಯಸ, ಬಾಳೆ ದಿಂಡಿನ ಬೆಲ್ಲದ ಪಾಕ, ಗೊಂಬಳ ಕಾಯಿ ಜ್ಯೂಸ್, ಮಜ್ಜಿಗೆ ಸೊಪ್ಪಿನ ಮಜ್ಜಿಗೆ ಹಾಗೂ ಸಾಂಪ್ರದಾಯಿಕ ಹಾಲುಬಾಯಿ ಇರಲಿವೆ.

ಶಾಲಾ ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲಿ ಪ್ರಬಂಧ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನುಆಯೋಜಿಸಲಾಗಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ₹3,000 ಹಾಗೂ ದ್ವಿತೀಯ ₹2,000 ನಗದು ಬಹುಮಾನ ನೀಡಲಾಗುತ್ತದೆ. ಭಾಷಣಸ್ಪರ್ಧೆ: “ಪ್ರಸ್ತುತ ಕಾಲಘಟ್ಟದಲ್ಲಿ ಆಯುರ್ವೇದದ ಮಹತ್ವ” (5ರಿಂದ 7ನೇ ತರಗತಿ ಹಾಗೂ 8 ರಿಂದ 10ನೇ ತರಗತಿ – ಪ್ರತಿಶಾಲೆಗೆ ಇಬ್ಬರು ವಿದ್ಯಾರ್ಥಿಗಳು). ಪ್ರಬಂಧ ಸ್ಪರ್ಧೆ: “ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಾಂಪ್ರದಾಯಿಕ ಆಹಾರ ಮತ್ತು ಆಯುರ್ವೇದದ ಪಾತ್ರ” (5ರಿಂದ 7ನೇತರಗತಿ ಹಾಗೂ 8 ರಿಂದ 10ನೇತರಗತಿ – ಪ್ರತಿಶಾಲೆಗೆ ಇಬ್ಬರು ವಿದ್ಯಾರ್ಥಿಗಳು). ಚಿತ್ರಕಲೆ ಸ್ಪರ್ಧೆ: “ಪ್ರಕೃತಿ ಮತ್ತು ಆಯುರ್ವೇದ” (1ರಿಂದ 4ನೇ ತರಗತಿಯ ಮಕ್ಕಳಿಗೆ), ಯುವ ವಿಚಾರ ಸಂಕಿರಣ (#Chithrakoota GenZ Ayurveda): ಮಧ್ಯಾಹ್ನ ಯುವಜನತೆ, ವೈದ್ಯರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ಮುಕ್ತ ಸಂವಾದ ನಡೆಯಲಿದೆ.

ಖ್ಯಾತ ಆಯುರ್ವೇದ ತಜ್ಞ ಡಾ. ರಾಜೇಶ್ ಬಾಯರಿ ಅವರು 2008ರಲ್ಲಿ ಅಡಿಪಾಯ ಹಾಕಿ, 2010ರಲ್ಲಿ ಆರಂಭಿಸಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯವು ಇಂದು18 ಎಕರೆ ವಿಸ್ತಾರವಾದ ಹಸಿರು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಸಿ ಗೋಶಾಲೆ, ಸ್ವಂತ ಔಷಧಾಲಯ, ಪ್ರತಿದಿನ ಯೋಗ-ಧ್ಯಾನ ಮುಂತಾದವುಗಳ ಮೂಲಕ ಅಧಿಕೃತ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೆ ವಿಶ್ವದ 30ಕ್ಕೂಹೆಚ್ಚುದೇಶಗಳ ರೋಗಿಗಳು ಇಲ್ಲಿ ಚಿಕಿತ್ಸೆಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ, ಆಲೂರು, ಕುಂದಾಪುರ ತಾಲೂಕು, ಉಡುಪಿಜಿಲ್ಲೆ, ದೂರವಾಣಿ: 9187471578, ಇನ್‌ಸ್ಟಾಗ್ರಾಮ್: @chithrakoota | ವೆಬ್‌ಸೈಟ್: chithrakoota.com ನ್ನು ಸಂಪರ್ಕಿಸಲು ಕೋರಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!