ಕುಂದಾಪುರ: ಇಡೀ ದೇಶದಲ್ಲಿರುವ ಬಿಜೆಪಿ, ಸಂಘ ಪರಿವಾರಗಳ ಮಾನಸಿಕ ಅಸ್ವಸ್ಥತೆ ಬಹಿರಂಗವಾಗಿದೆ. – ಸುಧೀರ್‌ಕುಮಾರ್ ಮರೋಳಿ ಆಕ್ರೋಶ
ಖರ್ಗೆ ಭಾಷಣ ಮಾಡಿದ ಸ್ಥಳ ಶುಚಿಗೊಳಿಸಿ ಅಸ್ಪೃಶ್ಯತೆ ಮೆರೆದದ್ದಕ್ಕೆ ಕುಂದಾಪುರದಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ, ಮೆರವಣಿಗೆ, ಮನವಿ,


ಕುಂದಾಪುರ: ಈ ದೇಶದ ರಾಜ್ಯ ಸಭೆಯ ಸದಸ್ಯರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿದ ಜಾಗದಲ್ಲಿ ಮನುವಾದಿ ಬಿಜೆಪಿಗರು ಶುದ್ದೀಕರಿಸುವ ಮೂಲಕ ಅಸ್ಪೃಶ್ಯತೆ ಆಚರಿಸಿದ್ದು, ಬಿಜೆಪಿ ಹಾಗೂ ಆರೆಸ್ಸೆಸ್ ಸಂಘಟನೆಗಳ ಮಾನಸಿಕ ಅಸ್ವಸ್ಥತೆ ಬಹಿರಂಗಗೊಂಡಿದೆ. ಜೊತೆಗೆ ಬಿಜೆಪಿ ಹಾಗೂ ಸಂಘ ಪರಿವಾರಗಳು ಮಾನವ ವಿರೋಧಿಗಳು ಎನ್ನುವುದನ್ನು ಸಾಬೀತುಪಡಿಸಿವೆ ಎಂದು ಕಾಂಗ್ರೆಸ್ ವಕ್ತಾರ, ವಾಗ್ಮಿ ಸುಧೀರ್ ಕುಮಾರ್ ಮರೋಳಿ ಆರೋಪಿಸಿದ್ದಾರೆ.


ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಗುರುವಾರ ಸಂಜೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದುತ್ವದ ಹೆಸರಿನಲ್ಲಿ ಮತ ಬ್ಯಾಂಕ್ ಪಡೆಯುತ್ತಿರುವ ಬಿಜೆಪಿ ಹಾಗೂ ಆರೆಸ್ಸೆಸ್ ಮತ್ತದರ ಪರಿವಾರ ಈ ದೇಶದ ಮೂಲ ನಿವಾಸಿಗಳನ್ನು, ದಲಿತರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ರಾಮಲೀಲಾದಲ್ಲಿ ಗಂಗಾಜಲ ಮೂಲಕ ಶುದ್ಧೀಕರಿಸಿದ ಘಟನೆಯೇ ಸಾಕ್ಷಿ. ನಿಮಗೆ ಬಿ.ಆರ್. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ನಿತ್ಯ ತೊಳೆಯಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ ಅವರು, ಈ ದೇಶ ಇನ್ನಷ್ಟು ಗಟ್ಟಿಯಾಗಬೇಕಾದರೆ ಹಿಂದೂಗಳನ್ನು, ದೇಶದ ಸಂಸ್ಕೃತಿಯನ್ನು, ದೇವಸ್ಥಾನಗಳನ್ನು, ಹಿಂದೂಗಳನ್ನು ಮನುವಾದಿಗಳಿಂದ, ಸಂಘಪರಿವಾರಗಳ ಹಿಡಿತದಿಂದ ಬಿಡಿಸಿ ಸ್ವತಂತ್ರವಾಗಿಸಬೇಕು ಎಂದು ಹೇಳಿದರು. ಇದೊಂದು ಸಾಂಕೇತಿಕ ಪ್ರತಿಭಟನೆ ಅಷ್ಟೇ, ಸಂಘ ಪರಿವಾರ ಹಾಗೂ ಬಿಜೆಪಿಯಿಂದ ಇಂತಹಾ ಘಟನೆಗಳು ಮುಂದುವರಿದರೆ ದೇಶದಾದ್ಯಂತ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದರು.


ಇದೇ ಸಂದರ್ಭ ದಲಿತ ನಾಯಕರಾದ ವಕೀಲ ಮಂಜುನಾಥ ಗಿಳಿಯಾರ್, ಜಗದೀಶ್ ಗಂಗೊಳ್ಳಿ, ಅಶ್ವಥ್ ಮೊದಲಾದವರು ಮಾತನಾಡಿದರು. ಬಳಿಕ ಬಿಜೆಪಿ ಸಂಘಪರಿವಾರಗಳಿಗೆ ಧಿಕ್ಕಾರ ಕೂಗುತ್ತಾ ಶಾಸ್ತ್ರೀ ವೃತ್ತದಿಂದ ಕಾಲ್ನಡಿಗೆಯಲ್ಲಿ ಸಾಗಿದ ಮೆರವಣಿಗೆ ಕುಂದಾಪುರದ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾಪನಗೊಂಡಿತು. ಬಳಿಕ ತಹಸೀಲ್ದಾರರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ನೀಡಲಾಯಿತು.



ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಮಾಜೀ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ವಿನೋದ್ ಕ್ರಾಸ್ತಾ, ಯುವ ಕಾಂಗ್ರೆಸ್ ಮುಖಂಡರಾದ, ಇಚ್ಛಿತಾರ್ಥ ಶೆಟ್ಟಿ, ರೋಷನ್ ಶೆಟ್ಟಿ, ನಾಗೇಂದ್ರ ಪುತ್ರನ್ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
