ಕುಂದಾಪುರ: ಪತ್ರಕರ್ತನ ಮೇಲೆ ವೈದ್ಯನಿಂದ ಹಲ್ಲೆ! ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ದಾಳಿ ಆರೋಪ – ಕಾರ್ಯನಿರತ ಪತ್ರಕರ್ತರ ಸಂಘದಿಂದ ಕ್ರಮಕ್ಕೆ ಆಗ್ರಹ
ಕುಂದಾಪುರ: ಮಾಧ್ಯಮ ಕ್ಷೇತ್ರವನ್ನೇ ತಲ್ಲಣಗೊಳಿಸುವ ಘಟನೆಯೊಂದು ಕುಂದಾಪುರದಲ್ಲಿ ನಡೆದಿದೆ. ಸತ್ಯವನ್ನು ಸಮಾಜದ ಮುಂದಿಡುವ ಮಾಧ್ಯಮದ ಧ್ವನಿಯನ್ನು ಉಡುಗಿಸುವ ಯತ್ನ ನಡೆದಿದೆ. ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ಮಹೇಂದ್ರ ಶೆಟ್ಟಿ ಎಂಬುವರು ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದೇ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲಿನ ಈ ದೌರ್ಜನ್ಯಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.


ಹೌದು, ಇತ್ತೀಚೆಗಷ್ಟೇ ಶ್ರೀಕಾಂತ್ ಹೆಮ್ಮಾಡಿ ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಶೆಟ್ಟಿ ಅವರ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಕುರಿತು ವಿಶೇಷ ವರದಿ ಪ್ರಕಟಿಸಿದ್ದರು. ಈ ವರದಿ ಪ್ರಕಟವಾಗುತ್ತಿದ್ದಂತೆ ಡಾ. ಮಹೇಂದ್ರ ಶೆಟ್ಟಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.


ಶುಕ್ರವಾರ ಶ್ರೀಕಾಂತ್ ಹೆಮ್ಮಾಡಿ ಅವರು ತಮ್ಮ ಪತ್ನಿಯೊಂದಿಗೆ ಖಾಸಗಿ ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭ, ಸ್ಥಳಕ್ಕೆ ಬಂದ ವೈದ್ಯ ಡಾ. ಮಹೇಂದ್ರ ಶೆಟ್ಟಿ ಏಕಾಏಕಿ ಜಗಳ ತೆಗೆದು, ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ! ಸಾರ್ವಜನಿಕ ಸ್ಥಳದಲ್ಲೇ ಪತ್ರಕರ್ತನ ಮೇಲೆ ನಡೆದ ಈ ಅಟ್ಯಾಕ್ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ದಾಳಿಗೊಳಗಾದ ಶ್ರೀಕಾಂತ್ ಹೆಮ್ಮಾಡಿ ಅವರನ್ನು ತಕ್ಷಣವೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.


ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಈ ದಾಳಿಯನ್ನು ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಉನ್ನತಾಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿ, ದೌರ್ಜನ್ಯ ಎಸಗಿದ ಆರೋಪಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
