ವಿದ್ಯಾರ್ಥಿಗಳ ಮೇಲಿನ ದಾಳಿ ಪ್ರಜಾಪ್ರಭುತ್ವ ವಿರೋಧಿ ಕೃತ್ಯ – ಅಶೋಕ್ ಪೂಜಾರಿ ಬೀಜಾಡಿ
ಕುಂದಾಪುರ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವುದು ಮತ್ತು ಅವರ ನ್ಯಾಯಸಮ್ಮತ ಹೋರಾಟವನ್ನು ದಮನ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಬೀಜಾಡಿ ಹೇಳಿದ್ದಾರೆ.

ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿ ಸಮೂಹದ ಹಿತರಕ್ಷಣೆಗಾಗಿ ಮತ್ತು ಅವರ ಶೈಕ್ಷಣಿಕ ನ್ಯಾಯಕ್ಕಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಅಶೋಕ್ ಪೂಜಾರಿ ಬೀಜಾಡಿ ಅವರು, ಇಂದು ವಿದ್ಯಾರ್ಥಿಗಳ ನ್ಯಾಯಸಮ್ಮತ ಹೋರಾಟದ ಮೇಲೆ ನಡೆದ ಅಮಾನವೀಯ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಯುವ ಜನತೆ ದೇಶದ ಶಕ್ತಿ. ಅವರ ಹಕ್ಕುಗಳಿಗಾಗಿ ಮತ್ತು ಪಾರದರ್ಶಕತೆಗಾಗಿ ಹೋರಾಡುವುದು ಸಂವಿಧಾನಬದ್ಧ ಹಕ್ಕು. ಅವರ ಧ್ವನಿಯನ್ನು ಆಲಿಸಿ ನ್ಯಾಯ ಒದಗಿಸುವ ಬದಲು, ಈ ರೀತಿಯ ದೌರ್ಜನ್ಯ ಎಸಗಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹವಾಗಿದೆ. ಈ ದಾಳಿಗೆ ಕಾರಣರಾದವರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರದ ಬಲದಿಂದ ವಿದ್ಯಾರ್ಥಿ ಸಮೂಹದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಬಂಧನ ಅಥವಾ ದೌರ್ಜನ್ಯದ ಭೀತಿಯನ್ನು ಒಡ್ಡಿ ಹೋರಾಟವನ್ನು ಹತ್ತಿಕ್ಕುವ ಕುತಂತ್ರದ ಪ್ರಯತ್ನವನ್ನು ತಕ್ಷಣವೇ ಕೈಬಿಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
