BlogCulturalEconomyEducationEntertainmentFashionHealthHighlightsHuman storiesLifestyleLocal newsTop StoriesTrending

ಸುಜ್ಞಾನದಲ್ಲಿ ಯೋಗ ದಿನಾಚರಣೆ: ದೈಹಿಕ ಹಾಗೂ ಮಾನಸಿಕ ಸಮತೋಲನಕ್ಕೆ ಯೋಗ ಅತ್ಯಗತ್ಯ- ಡಾ. ದೀಕ್ಷಾ ಶೆಣೈ

Aware others:

ಕುಂದಾಪುರ: “ಆಧುನಿಕ ಜಗತ್ತಿನ ಒತ್ತಡದ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಯೋಗ ಅತ್ಯಗತ್ಯ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಮತ್ತು ಏಕಾಗ್ರತೆ ಹೆಚ್ಚಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ವೈದ್ಯೆ ಡಾ. ದೀಕ್ಷಾ ಶೆಣೈ ಅವರು ನುಡಿದರು.

ಅವರು ಇಲ್ಲಿನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ ಹಾಗೂ ಸುಜ್ಞಾನ ಪದವಿ ಪೂರ್ವ ಕಾಲೇಜು, ಕುಂದಾಪುರ ಇವುಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಪ್ರೇರಣಾದಾಯಕ ಸಂದೇಶ ನೀಡಿದರು.

“ಇಂದಿನ ಯೋಗಾಭ್ಯಾಸ, ನಾಳಿನ ಉಜ್ವಲ ಭವಿಷ್ಯ” ಎಂಬ ಧ್ಯೇಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಆರೋಗ್ಯ, ಸಾಮರಸ್ಯ ಮತ್ತು ಮನಃಶಾಂತಿಯ ಸಂದೇಶವನ್ನು ಸಾರುವ ಯೋಗಾಭ್ಯಾಸದಲ್ಲಿ ಅತ್ಯಂತ ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಿದರು. ಸಂಸ್ಥೆಯ ಪ್ರಮುಖರು ಹಾಗೂ ಶಿಕ್ಷಕ ವೃಂದದ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನಗಳು ಮತ್ತು ಪ್ರಾಣಾಯಾಮಗಳನ್ನು ಶಿಸ್ತುಬದ್ಧವಾಗಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ತಮ್ಮ ಬದ್ಧತೆಯನ್ನು ತೋರ್ಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಕಾರ್ಯಕ್ಷಮತೆ ವೃದ್ಧಿಯಾಗುತ್ತದೆ ಎಂದರು.

ಇದೇ ಸಂದರ್ಭ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿ, ರಾಷ್ಟ್ರೀಯ ಯೋಗ ಪಟು ಲಾಸ್ಯಾ ಮದ್ಯಸ್ಥ ಅವರು ಅದ್ಭುತ ಯೋಗಾಸನಗಳ ಪ್ರದರ್ಶನ ನೀಡಿದರು. ಬಳಿಕ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಪ್ರದೀಪ್, ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲೆ ಅನಿತಾ ಕುಮಾರಿ ಹಾಗೂ ಉಪ ಪ್ರಾಂಶುಪಾಲೆ ಸ್ಪೂರ್ತಿ ಎ. ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಶುಭಹಾರೈಸಿದರು. ಸಂಸ್ಕೃತ ಶಿಕ್ಷಕ ರಜತ್ ಭಟ್ ನಿರೂಪಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!